ಸೋಮವಾರ, ಮಾರ್ಚ್ 30, 2015

ಡೆತ್ ವ್ಯಾಲೀಯ ಚಲಿಸುವ ಕಲ್ಲುಗಳು - Moving Stones of Death valley.

ಉತ್ತರ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಡೆತ್ ವ್ಯಾಲೀ ನ್ಯಾಶನಲ್ ಪಾರ್ಕ್ ಇದೆ. ಅಲ್ಲಿ ರೇಸ್ ಟ್ರ್ಯಾಕ್ ಪ್ಲಾಯ (RaceTrack Playa) ಜಾಗದಲ್ಲಿ ಒಂದು ಕುತೂಹಲ ನೆಡೆಯುತ್ತೆ. ಹೆಸರಿಗೆ ತಕ್ಕಂತೆ ಕಲ್ಲುಗಳು ನುಣುಪಾದ ಭೂಮಿಯ ಮೇಲ್ಮಯ್ನಲ್ಲಿ ಚಲಿಸುತ್ತವೆ. ಡೆತ್ ವ್ಯಾಲೀ ಎಷ್ಟು ಭಯಂಕರ ಮರಳುಗಾಡು ಅಂದ್ರೆ ಅಲ್ಲಿ ವರ್ಷಕ್ಕೆ ಮಳೆಯಾಗೋದು ಕೇವಲ 2 ಇಂಚು, ಬೇಸಿಗೆಯಲ್ಲಿ ತಾಪಮಾನ 50 ಡಿಗ್ರೀ ಮುಟ್ಟೋದು ತುಂಬಾ ಸಾಮಾನ್ಯ. ಇಂಥ ಜಾಗದಲ್ಲಿ ಕಲ್ಲುಗಳು ಯಾವುದೇ ಬಾಹ್ಯ ಬಾಲಪ್ರಯೋಗವಿಲ್ಲದೆ ಚಲಿಸುತ್ತವೆ. 

ಕಲ್ಲುಗಳ ಗಾತ್ರ ಕೆಲವು ಸೆಂಟಿಮೀಟರ್ ನಿಂದ ಹಿಡಿದು ಹಲವು ಅಡಿಗಳವರೆಗೂ ಇರುತ್ತವೆ. ಈ ಕಲ್ಲುಗಳು ನೇರವಾಗಿ ಅಥವಾ ಜ಼ಿಗ್‌ಜ಼ಾಗ್ ಶೈಲಿಯಲ್ಲಿ ಚಲಿಸುತ್ತವೆ. ಕೆಲವು ಕಲ್ಲುಗಳು ದಿಕ್ಕು ಬದಲಾಯಿಸಿ ಚಲಿಸಿದ ಉದಾಹರಣೆಗಳೂ ಇವೆ. ಒಮ್ಮೊಮ್ಮೆ ಎರಡು ಕಲ್ಲುಗಳು ಅಕ್ಕ ಪಕ್ಕ ಚಲಿಸಿ, ಸ್ವಲ್ಪ ದೂರದ ನಂತರ ಒಂದು ಕಲ್ಲು ದಿಕ್ಕು ಬದಲಾಯಿಸಿದ್ದೂ ಇದೆ. ಕಲ್ಲು ಚಲಿಸುವಾಗ ಅದು ಸಾಗಿ ಬಂದ ದಾರಿ ಹಲವು ತಿಂಗಳಾದರೂ ಅಳಿಸದೆ ಉಳಿದಿರುತ್ತವೆ. 
ರೇಸ್ ಟ್ರ್ಯಾಕ್ ನಲ್ಲಿ ವಾಹನಗಳು ಚಲಿಸಿದಂತೆ ಇಲ್ಲಿ ಕಲ್ಲುಗಳು ಅಕ್ಕ ಪಕ್ಕ ರೇಸ್ ಹೊರಟಂತೆ ಕಾಣುತ್ತವೆ.
ಇದರ ಬಗ್ಗೆ ಮೊದಲು ರಿಸರ್ಚ್ ನೆಡೆದಿದ್ದು 1915 ರಲ್ಲಿ. ಮೊದಲಿಗೆ ಜೊಸೆಫ್ ಕ್ರುಕ್ ಎಂಬಾತ ಈ ವಿದ್ಯಮಾನವನ್ನು ಗಮನಿಸಿದ. ನಂತರ 1948ರಲ್ಲಿ ಇಬ್ಬರು ಭೂವಿಜ್ಞಾನಿಗಳು ಈ ಸ್ಥಳವನ್ನು ಪರೀಕ್ಷೆ ಮಾಡಿ ಜಿಯೊಲಾಜಿಕ್ ಸೊಸೈಟೀ ಆಫ್ ಅಮೇರಿಕದಲ್ಲಿ ಪ್ರಕಟಿಸಿದರು. ಹೀಗೆ ಸುಮಾರು 90 ವರ್ಷಗಳ ಕಾಲ ಈ ವಿದ್ಯಮಾನ ಒಂದು ಒಗಟಾಗೇ ಉಳಿದಿತ್ತು. 2013 ಡಿಸೆಂಬರ್ ನಲ್ಲಿ ಲೊರೆಂಜ಼್ ಮತ್ತು  ನಾರಿಸ್ ಮತ್ತವರ ತಂಡ ಈ ಕೌತುಕವನ್ನು ಕಣ್ಣಾರೆ ಕಂಡರು. 

ಮಿಲ್ಕೀವೇ ಗ್ಯಾಲಕ್ಸೀ ಮತ್ತು ಚಲಿಸುವ ಕಲ್ಲುಗಳು.
ಡಿಸೆಂಬರ್ 2013 ರಲ್ಲಿ ಚಳಿಗಾಲದ ಒಂದು ದಿನ ನೀರು ನಿಂತಿತ್ತು, ರಾತ್ರಿ ಆ ನೀರು ಹೆಪ್ಪು ಗಟ್ಟಿ 3 ಇಂಚು ದಪ್ಪದ ಐಸ್ ಪದರವಾಗಿ ಮಾರ್ಪಟ್ಟಿತ್ತು. ಬೆಳಗಾಗುವಾಗ ಐಸ್ ಕರಗಲು ಶುರುವಾದೊಡನೆ ಕಲ್ಲುಗಳು ಚಲಿಸಲು ಶುರುವಾಯ್ತು. ಐಸ್ ಕರಗಿದಂತೆಲ್ಲ ಕಲ್ಲುಗಳು ಚಲಿಸಿದವು. ಒಂದೊಂದು ಕಲ್ಲು ಒಂದೊಂದು ದಿಕ್ಕಿನಲ್ಲಿ ಚಲಿಸಿದವು. ನಿಮಿಷಕ್ಕೆ ಕೆಲವು ಸೆಂಟಿಮೀಟರ್ ನಿಂದ ಹಿಡಿದು, ಕೆಲವು ಇಂಚುಗಳವರೆಗೆ ಚಲಿಸಿದುವು. ಜೊತೆಯಲ್ಲಿ 10-16 ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿ ಕಲ್ಲುಗಳನ್ನು ತಳ್ಳುತ್ತಿತ್ತು. ಕೆಲವು ಕಲ್ಲುಗಳಂತೂ 200 ಅಡಿಗೂ ಹೆಚ್ಚು ಚಲಿಸಿದುವು.
ಕೊನೆಗೂ ಚಲಿಸುವ ಕಲ್ಲುಗಳ ವಿಲಕ್ಷಣ ನಡುವಳಿಕೆಯ ರಹಸ್ಯ ಬಯಲಾಯ್ತು.

ಆದರೂ ನಾರಿಸ್ ಮತ್ತು ಲೊರೆಂಜ಼್ ಪ್ರಕಾರ ಅವರ ಅನ್ವೇಷಣೆ ಇನ್ನೂ ಮುಗಿದಿಲ್ಲ. ಅವರಿಗೆ ಗೋಚರವಾಗದ್ದೂ ಇನ್ನೂ ಏನೋ ಇದೆ ಅಂತ ಅವರ ಅನಿಸಿಕೆ.  ಒಟ್ಟಿನಲ್ಲಿ ಭೂಮಿ ನಮ್ಮ ಅರಿವಿಗೆ ಬಾರದ ಎಷ್ಟೋ ಕೌತುಕಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿದ್ದಾಳೆ. ಇದನ್ನೆಲ್ಲ ಅರಿಯಲು ಅದೆಷ್ಟು ಯುಗಗಳು ಬೇಕಾಗಬಹುದೋ ಏನೋ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ