ಶುಕ್ರವಾರ, ಮಾರ್ಚ್ 27, 2015

ಕಿರುಗತೆ - ಶರಣಾಗತಿ


ಮಳೆಗಾಲದ ಒಂದು ಸಂಜೆ. ಹಿಂದಿನ ಜಾವ ಶುರುವಾದ ಆಶ್ಲೇಷ ಮಳೆ ಇನ್ನೂ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ ಸಂಜೆ ಘಂಟೆ ನಾಲ್ಕಾದರೂ ಮನೆಯ ಒಳಗೆ ಕತ್ತಲೂ ಕತ್ತಲು. ಮನೆ ಹಿಂದಿನ ಭೂತದ ಗುಡ್ಡ ಕಪ್ಪಾದ ಮೋಡಗಳಿಂದ ಮುಚ್ಚಿಹೂಗಿತ್ತು.  ಧೋ ಎಂದು ಸುರಿಯುತ್ತಿರುವ ಮಳೆಗೆ ಅಡುಗೆಮನೆಯಿಂದ ರಾಧಮ್ಮ ಕರೆದಿದ್ದು ಮಂಜಪ್ಪನಿಗೆ ಕೇಳಲೇ ಇಲ್ಲ. ಮಳೆಯ ಸದ್ದಿಗೆ ಕೇಳಲಿಲ್ಲವೋ, ಮಂಜಪ್ಪನ ಯೋಚನಾಲಹರಿಯಿಂದ ಕೇಳಲಿಲ್ಲವೋ, ಕೇವಲ ಮಂಜಪ್ಪನಿಗೆ ಮಾತ್ರ ಗೊತ್ತು.
ಮಂಜಪ್ಪ ಆಗತಾನೆ ಶಾನುಭೋಗರ ಮಗ ಬಂದು ಹೇಳಿದ ಸುಧ್ಧಿಯಿಂದ ಕುಸಿದು ಹೋಗಿದ್ದ. ಮಳೆಗಾಲಕ್ಕೆಂದು ಹಾಕಿದ್ದ ಹಳೇ ಅಡಿಕೆ ತಟ್ಟಿಯ ಮಧ್ಯದಿಂದ ಮಳೆನೀರು ಮಂಜಪ್ಪನ ಮುಖದಮೇಲೆ ರಾಚುತ್ತಿದ್ದರೂ ಅದಾವುದರ ಪರಿವೆಯೇ ಇಲ್ಲದಂತೆ ಕೂತಿದ್ದ.
ಒಳಮನೆಯಿಂದ ರಾಧಮ್ಮ ಕಾಪಿ ತಂದುಕೊಟ್ಟು "ಕೇಳ್ತಾ, ಇದೆಂತ ಹಾಳು ಮಳೆ, ದನದ ಕೊಟ್ಟಿಗೆ ಕುಸಿಯೋ ಹಾಗಿದೆ, ಒಂಚೂರು ನೋಡ್ಬಾರ್ದ" ಅಂದಳು.

ಮಂಜಪ್ಪನದು ಮುಗಿಲಗಿರಿ ಕಾಡಿನ ಅರಳಿಬೈಲು ಅನ್ನೋ ಊರಲ್ಲಿರೋ ಮುತ್ತಜ್ಜ ಕಟ್ಟಿದ ಹಳೇ ಮನೆ. ಊರಿಗೆ 12 ಮನೆ, ದಿನಕ್ಕೆ 4 ಬಸ್ಸು. ಆಸ್ಪತ್ರೆ ಶಾಲೆ ಬೇಕು ಅಂದ್ರೆ 20 ಮೈಲು ದೂರದ ಜಿಲ್ಲಾಕೇಂದ್ರಕ್ಕೆ ಹೋಗ್ಬೇಕು. ಆ ಮನೆಯ ಸ್ಥಿತಿಯೋ ಆ ದೇವರಿಗೆ ಪ್ರೀತಿ. ನೂರಕ್ಕೂ ಹೆಚ್ಚು ಮಳೆಗಾಲ ಕಂಡಿರುವ ಮನೆ, ಈಗಲೋ ಆಗಲೋ ಕುಸಿಯುವ ಸ್ಥಿತಿಯಲ್ಲಿತ್ತು.

ಈಗ್ಗೆ ಸುಮಾರು ಐದಾರು  ವರ್ಷದ ಹಿಂದೆ ಸರಕಾರ ಮುಗಿಲಗಿರಿ ಮತ್ತು ಸುತ್ತಮುತ್ತಲ 200 ಚದರ ಮೈಲು ಕಾಡನ್ನ ಹುಲಿ ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡಿತ್ತು. ಮಂಜಪ್ಪನ ಕಷ್ಟಗಳು ಶುರುವಾಗಿದ್ದೆ ಆಗ. ಕಾನೂನಿನ ಪ್ರಕಾರ ಮಂಜಪ್ಪ ತನ್ನ 200 ಮರದ ಅಡಿಕೆ ತೋಟ ಹಾಗೂ ಮನೆ ಬಿಟ್ಟು ಒಕ್ಕಲು ಏಳಬೇಕಾಯ್ತು.

ಒಂದು ರೀತಿಯಲ್ಲಿ ಇದು ಒಳ್ಳೆಯದೇ ಆದರೂ ಸರಕಾರ ಕೊಡುವ ದುಡ್ಡು ಯಾತಕ್ಕೂ ಸಾಲಲ್ಲ ಅಂತ ಮಂಜಪ್ಪಂಗೆ ಗೊತ್ತಿತ್ತು. ಆಗತಾನೆ ಡಿಗ್ರೀ ಮುಗಿಸಿ ಮನೆಗೆ ಬಂದಿದ್ದ ಮಂಜಪ್ಪನ ಮಗ ಗಿರೀಶನಿಗೆ ಸರ್ಕಾರದ ರೀತಿ ಸರಿ ಕಾಣಲಿಲ್ಲ. ನಮ್ಮ ಮನೆ, ನಮ್ಮ ಜಾಮೀನು ಯಾಕೆ ನಯಾಪೈಸೆ ಬೆಲೆಗೆ ಸರಕಾರಕ್ಕೆ ಕೊಡ್ಬೇಕು ಅಂತ.

ಗಿರೀಶ ಸುತ್ತಮುತ್ತಲ ಊರಿನ ಹತ್ತು  ಹನ್ನೆರಡು ಹುಡುಗರನ್ನ ಸೇರಿಸಿ ಜಿಲ್ಲಾ ಕೇಂದ್ರಕ್ಕೆ ದೂರು ಕೊಟ್ಟ, ನ್ಯೂಸ್ಪೇಪರ್ಗೆ ಬರ್ದು ಹಾಕ್ದ. ಎಲ್ಲೂ ಏನೂ ಉತ್ತರ ಬರ್ಲಿಲ್ಲ. ಪ್ರತಿಭಟನೆ ಮಾಡ್ದ, ಕೊನೆಗೆ ಒಂದ್ ದಿನ ಪೊಲೀಸಿನವ್ರು ಮನೆಗೆ ಹುಡ್ಕ್ಕೊಂಡು ಬಂದ್ರು. ಗಿರೀಶ ಮತ್ತವನ ತಂಡ ಪೋಲೀಸ್ ಸ್ಟೇಶನ್ಗೆ ಬೆಂಕಿ ಹಚ್ಚಿ ಬಂದಿದ್ರು. ಗಿರೀಶ ಅವತ್ತು ಕಾಣೆ ಆದವ್ನು ಮತ್ತೆ ಮನೆಗೆ ಬರ್ಲೇ ಇಲ್ಲ.

ಮುಂದಿನ ವಾರದ ಸಂತೇಲಿ ನಕ್ಸಲರ ಕರಪತ್ರಗಳು ಸಿಕ್ಕಿದ್ವು. ನಮ್ಮ ಜೊತೆ ಕೈ ಜೋಡ್ಸಿ, ನಿಮಗೆ ನಿಮ್ಮ ಭೂಮಿ ಬಿಡಿಸಿ ಕೊಡ್ತೀವಿ ಅಂತ. ಮತ್ತೆ ಪೋಲೀಸ್ನವ್ರು ಬಂದ್ರು, ಮನೆ ಮನೆ ಹುಡ್ಕಿದ್ರು. ಕೇಂದ್ರ ಸರಕಾರ ಗನ್ ಹಿಡ್ಕೊಂಡಿರೋ ಪೋಲೀಸ್ನ ಕಳುಹಿಸ್ತು. ಕೂಂಬಿಂಗ್ ಅದು ಇದು ಅಂತ ಊರಿನ ತುಂಬಾ ಪೊಲೀಸರು. ಆದ್ರೂ ಮಂಜಪ್ಪ ನನ್ನ ಮಗ ನಕ್ಸಲ್ ಆಗಿದಾನೆ ಅಂತ ನಂಬೋಕೆ ತಯಾರಿಲ್ಲ. ಎಷ್ಟೋ ವಿಷಯಗಳನ್ನ ರಾಧಮ್ಮನಿಂದ ಮುಚ್ಚಿಟ್ಟಿದ್ದ.


ಆಗತಾನೇ ಮಳೆಗಾಲ ಶುರು ಆಗಿತ್ತು. ಜೋರಾಗಿ ಮಳೆ ಸುರೀತಾ ಇತ್ತು. ರಾತ್ರಿ ಜೋರಾಗಿ ಬಾಗಿಲು ಬಡಿದ ಸದ್ದು. ರಾಧಮ್ಮ ಬಾಗಿಲು ತೆಗೆದು ನೋಡಿದ್ರೆ ಬಾಗಿಲಲ್ಲಿ ಮಗ ನಿಂತಿದಾನೆ. ರಾಧಮ್ಮಂಗೆ ಖುಷಿಯೋ ಖುಷಿ. ಆದ್ರೆ ಆ ಖುಷಿ ಜಾಸ್ತಿ ಕ್ಷಣ ಉಳೀಲಿಲ್ಲ. ಮಗನ ಹಿಂದೆ 4 ಯುವಕರು ಗನ್ ಹಿಡ್ಕೊಂಡ್ ನಿಂತಿದ್ರು. ಒಳಗೆ ಬಂದ ಮಗ ಅಪ್ಪನ್ನ ಎಬ್ಸು ಅಂದ. ಅಪ್ಪನ ಹತ್ರ ಬೇರೆ ಕಾಡಿಗೆ ಹೋಗೋಕೆ ಹೋಗ್ತಾ ಇದೀವಿ. ಸ್ವಲ್ಪ ದಿನಸಿ ಪದಾರ್ಥ ಬೇಕು ಕೊಡಿ ಅಂದ. ಅಪ್ಪನ ಮಾತಿಗೂ ಕಾಯದೆ ಗಂಟು ಕಟ್ಟಿ ಸಿಕ್ಕಿದ್ದು ಎತ್ಕೊಂಡ್ ಹೋದ. ಮಂಜಪ್ಪ ರಾಧಮ್ಮಂಗೆ ಏನಾಯ್ತು ಅಂತ ಅರ್ಥ ಆಗೋಕೆ ಸುಮಾರು ಹೊತ್ತೇ ಬೇಕಾಯ್ತು. ಅಷ್ಟ್ರಲ್ಲಿ ಮಗ ಹೊರ್ತೋಗಿದ್ದ.

ಬೆಳಗ್ಗೆ ಪೊಲೀಸಿನವ್ರು ಬಂದ್ರು, ನಿನ್ನೆ ರಾತ್ರಿ ನೆಡೆದ ಪೋಲೀಸ್ ನಕ್ಸಲ್ ಚಕಮಕಿಯಲ್ಲಿ ನಿಮ್ಮ ಮಗ ಒಬ್ಬ ಪೊಲೀಸಿನವ್ರನ್ನ ಹೊಡೆದುಉರುಳಿಸಿದ್ದಾನೆ, ನಿಮ್ಮ ಮಗ ಮನೆಗೆ ಬಂದ್ರೆ ನಮಗೆ ತಕ್ಷಣ ವರದಿಮಾಡಿ ಅಂದ್ರು. ಮಂಜಪ್ಪ ಕುಸಿದು ಕುಳಿತ. ಒಳ್ಳೆ ಸರ್ಕಾರಿ ಕೆಲಸ ಹಿಡೀತಾನೆ ಮಗ ಅಂತ ಕನಸು ಕಟ್ಕೊಂಡಿದ್ರೆ ಈಗ ಪೊಲೀಸಿನವ್ರನ್ನ ಕೊಂದು ಕೊಲೆಗಾರ ಆಗಿದಾನೆ ಅಂತ. ಹೆಂಡತಿಗೆ ಹೇಳಿದ್ರೆ ಎಲ್ಲಿ ಏನಾಗತ್ತೋ ಅಂತ ಅವ್ಳಿಗೆ ಹೇಳಲೂ ಇಲ್ಲ. ಒಳಗೊಳಗೇ ನೋವು ಅನುಭವಿಸತೊಡಗಿದ.

ಹೀಗೆ ಸುಮಾರು ದಿನಗಳು ಕಳೆದವು. ಮಳೆಗಾಲದ ಕೊನೆ ಕೊನೆಗೆ ಬಂದಿತ್ತು. ಇದ್ದ 200 ಅಡಕೆ ಮರದ ಕೊನೆ ಇಳಿಸೋ ಕೆಲ್ಸ ಶುರು ಮಾಡ್ಬೇಕಿತ್ತು. ಆದ್ರೆ ಇವನಿಗೆ ಯಾವ್ದ್ರಲ್ಲೂ ಆಸಕ್ತಿ ಇಲ್ಲ. ಇದ್ದ ಒಬ್ಬ ಮಗನೂ ಮನೆ ಬಿಟ್ಟು ಕಾಡು ಸೇರ್ಕೊಂಡ್ಮೇಲೆ ಯಾರಿಗಾಗಿ ದುಡ್ಡು ಮಾಡ್ಬೇಕು, ಯಾರಿಗೋಸ್ಕರ ಬದುಕ್ಬೇಕು ಅಂತ ಯೋಚನೆ ಮಾಡ್ತಿದ್ದ. ಒಳಗೊಳಗೇ ಕುಸೀತಿದ್ದ.

ಕೊನೆಗೆ ಒಂದು ದಿನ ಮನಸ್ಸು ಮಾಡಿ ಮಗನ್ನ ನೋಡೋಕೆ ಬೆಂಗಳೂರಿಗೆ ಹೊರಟ. ಅವ್ರ ಇವ್ರ ಕಾಲು ಹಿಡಿದು ಮಗನ್ನ ಸಂಧಿಸಿದ. ಮಗನ ಮುಖದಲ್ಲಿ ಒಂದುಚೂರು ತಪ್ಪಿಸ್ಟಸ್ತ ಭಾವನೆ ಇರ್ಲೇ ಇಲ್ಲ. ಮಗ ಹೇಳಿದ. ಅಪ್ಪ ಪೊಲೀಸಿನವ್ರು ನನ್ನ ಹಿಡೀಲಿಲ್ಲ.  ಸೀತಕ್ಕ ಮತ್ತೆ ಒಂದಿಬ್ರು ಬುದ್ದಿಜೀವಿಗಳು ನನ್ನ ಶರಣಾಗತಿ ಮಾಡ್ಸಿದಾರೆ. ಸರ್ಕಾರದಿಂದ ನನಗೆ 3 ಲಕ್ಷ ದುಡ್ಡು, ಬಡ್ಡಿ ರಹಿತ ಸಲ ಎಲ್ಲ ಸಿಗ್ತಿದೆ, ನಡಿ ನಮ್ಮೂರಿಗೆ ಹೋಗಿ ಜಮೀನು  ತಗೊಂಡು ಬೇಸಾಯ ಮಾಡೋಣ ಅಂದ.

ಮಂಜಪ್ಪಂಗೆ ಎಲ್ಲಿಲ್ಲದ ಕೋಪ ಬಂತು. ಅನ್ನ ತಿನ್ನೋ ಮಕ್ಕಳೇ ಬದುಕೊದಿಲ್ಲ ಇನ್ನೂ ವಿಷ ತಿನ್ನೋ ಮಕ್ಳು ಬದುಕ್ತಾರ, ನನಗೆ ಸರ್ಕಾರದ ಭಿಕ್ಷೆ ಬೇಡ. ನೀನು ಜನರ ಕೊಲೆ ಮಾಡಿರೋನು, ಪಶ್ಚಾತಾಪ ಪಡೋದು ಬಿಟ್ಟು, ಯಾರೋ ಪೇಪರ್ನವರ ಮಾತು ಕೇಳ್ಕೊಂಡು ಸರ್ಕಾರದ ದುಡ್ಡು ತಗೊಳ್ತಾ ಇದೀಯಾ. ನೀನು ಶಿಕ್ಷೆ ಅನುಭವಿಸಬೇಕು. ನನ್ನ ಇಡೀ ವಂಶಸ್ತರು ನಿಯತ್ತು ಮಾನಕ್ಕೆ ಬದುಕಿದೋರು, ನಿನ್ನ ಈ ಪಾಪದ ದುಡ್ಡು ಬೇಡ, ಇನ್ನೂ ನಿನಗೂ ನನಗೂ ಸಂಬಂಧ ಇಲ್ಲ. ಮತ್ತೆ ಮನೆ ಕಡೆ ಬರೋ ಪ್ರಯತ್ನ ಮಾಡ್ಬೇಡ ಅಂತ ಹೇಳಿ ಸಂಜೆ ಇದ್ದ ಕೊನೇ ಬಸ್ಸಿಗೆ ಊರಿಗೆ ಹೊರಟ.

ಮನೆಗೆ ಬಂದು ಇನ್ನು ನಿನಗೂ ನಿನ್ನ ಮಗನಿಗೂ ಈ ಮನೆಗೂ ಋಣ ಮುಗೀತು. ನಾವು ಸರ್ಕಾರದ ಪರಿಹಾರ ಧನ ತಗೊಂಡು ಬೇರೆ ಕಡೆ ಮನೆ ಮಾಡ್ಕೋಳೋಣ ಅಂತ ಹೇಳಿ, ತಹಶೀಲ್ದಾರರ ಹತ್ತಿರ ಹೊರಟ. ಒಳಮನೆಯಲ್ಲಿ ರಾಧಮ್ಮ ಮುಸು ಮುಸು ಆಳುವ ಸದ್ದು ಮಳೆಯ ಚಿಟಿಪಿಟಿ ಸದ್ದಿನೊಳಗೆ ಸದ್ದಾಗಿ ಹೋಯ್ತು.

4 ಕಾಮೆಂಟ್‌ಗಳು:

  1. Thumba chennagide. . .kadime padagalalle Halli Maneya Hiriyara jeevanavanna, avara bhaavagallanna bimbisuvantide. . .:) :)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದ. ಮಲೆನಾಡಿನ ಸೌಂದರ್ಯವನ್ನ ಪದಗಳಲ್ಲಿ ಹಿಡಿದಿಡುವುದು ಕಷ್ಟಸಾಧ್ಯ. ಆದರೂ ಒಂದು ಸಣ್ಣ ಪ್ರಯತ್ನ.

      ಅಳಿಸಿ
  2. ತುಂಬ ಚಂದದ ಸಣ್ಣ ಕತೆ.. ಅಂತ ಸ್ವಾಭಿಮಾನನ ಹಳ್ಳಿಯ ಮುಗ್ದ ಜನಗಳಲ್ಲಷ್ಟೆ ಕಾಣುವುದಕ್ಕೆ ಸಾದ್ಯ.. ಬರವಣಿಗೆ ಮುಂದುವರಿಯಲಿ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದ. ಖಂಡಿತ, ಮುಗ್ಧತೆ ಕೇವಲ ಹಳ್ಳಿಯ ಜನರಬಳಿ ಮಾತ್ರ ಉಳಿದಿದೆ. ಬರವಣಿಗೆ ಖಂಡಿತ ಮುಂದುವರೆಯುತ್ತದೆ.

      ಅಳಿಸಿ